Tuesday, October 30, 2007

ದೋಸ್ತಿ ಸರಕಾರ

ನಾಯಕರುಗಳ ಅರಮನೆಗಳಲ್ಲಿ
ರಾಜಭವನದ ಅಂಗಳಗಳಲ್ಲಿ
ಅಂಕೆ ಸಂಖ್ಯೆಗಳ ಸಮೀಕರಣದಲ್ಲಿ
ಶಾಸ್ತ್ರ ಪಂಡಿತರೆ ಪಂಚಾಂಗಗಳಲ್ಲಿ
ಕುಣಿದು ಕುಪ್ಪಳಿಸುತ್ತಿತ್ತು
ದೋಸ್ತಿ ಸರಕಾರ
ಬಳಲಿ ಬೆಂಡಾಗಿದ್ದ ಮತದಾರ

Friday, September 21, 2007

ನಿನ್ನೆ ರಾತ್ರಿ ಬೆಂಗ್ಳೂರ್ನಲ್ಲಿ
ಟ್ರಾಫಿಕ್ ಕಡಿಮೆ ಇತ್ತು,

ಯಾಕಂದ್ರೆ ಟಿವಿಯಲ್ಲಿ
ಕ್ರಿಕೆಟ್ ಮ್ಯಾಚಿತ್ತು।

Thursday, September 13, 2007

ಹಗಲೂ ರಾತ್ರಿ ಕೆಲಸ ಮಾಡಿ
ಪ್ರಾಜೆಕ್ಟ್ ಮೇಲೆ ಪ್ರಾಜೆಕ್ಟ್ ಮಾಡಿ
ಪ್ರಾಜೆಕ್ಟ್ ಮ್ಯಾನೆಜರ್ ಆಗೋದರಲ್ಲಿ
ಮುದುಕ ಆಗಿದ್ದ
ಅದಕ್ಕೆ
"Man + age ರ್"

Monday, June 11, 2007

ನಾಯಿಗೆ ಬಲಿ


ಮನೆಯನು ಕಾಯುವ ನಿಷ್ಠೆಯ ಸೇವಕ
ಆಗಿರುವನೇಕೆ ಎಳೆಯರ ಅಂತಕ

ಧಾಳಿಗೆ ಸಿಕ್ಕಿದ ಜನಗಳು ಹಲವು
ಜೀವವ ತ್ಯಜಿಸಿದ ಕುಡಿಗಳು ಕೆಲವು

ಏತಕೆ ನಾಯಿಗೆ ಈ ಪರಿ ರೋಷ
ಜನರನು ಕಚ್ಚಿ ಕೊಲ್ಲುವ ದ್ವೇಷ

ನೋಡಿರಬಹುದೆ ಶ್ವಾನ ಪ್ರದರ್ಶನ
ಧನಿಕರ ಮಾಡುವ ಧನ ಪ್ರದರ್ಶನ

ಷೋಕಿಗೆ ಸಾಕಿದ ನಾಯಿಯ ಗತ್ತು
ಅಲೆದರೂ ದೊರೆಯದ ಕೂಳಿನ ತುತ್ತು

ಅನಿಸಿರ ಬಹುದು ಅವರೇಕೆ ಹೆಚ್ಚು
ಹುಟ್ಟಿರಬಹುದು ಸಮಾನತೆಯ ಕಿಚ್ಚು

Friday, June 01, 2007

ಮುಂದೆ..
ಹಣದ
ಚೆಲ್ಲಾಟ,
ಓಟಿಗಾಗಿ
ಪರದಾಟ
ಹಿಂದೆ..?
ಪರದೆ
ಹಿಂದೆ
ಆಟ

Tuesday, March 27, 2007

World Cup

ಲಂಕೆಯನ್ನು ಸುಟ್ಟ
ಹನುಮಂತ
ಬಾಲದಿಂದ
ಬಾಲ ಸುಟ್ಟರು
ಲಂಕನ್ನರು ತಮ್ಮ
Ball ನಿಂದ
ಹೊರಗೆ ಬೇಸಿಗೆಯ
ಬಿಸಿ
ಒಳಗೆ ಕೊರೆವ
ಛಳಿ
ನಮ್ಮ ಆಫೀಸಿನ
ಎ.ಸಿ.

Friday, March 16, 2007

ಯುಗಾದಿ

ಹೊಸ ವರ್ಷದ
ಹೊಸ ಬಾಳಿಗೆ
ಹಾಡಲೆಂದು
ನಾಂದಿ,
ನೆಲೆಕಾಣದ
ಬರಡು ಬದುಕಿಗೆ
ತೋರಲೆಂದು
ಹಾದಿ
ಭರದಿಂದಲಿ
ಬರುತಲಿದೆ
ಭರವಸೆಗಳ ಹೊತ್ತು
ಯುಗಾದಿ

Friday, March 09, 2007

WeekEnd

ಅತೀ ಕೆಲಸದಿಂದ
ಆಗದಿರಲಿ
ವೀಕ್ ಎಂದು
ಬಂದಿದೆ ಈಗ
ವೀಕೆಂಡು

Thursday, March 08, 2007

ಆಸೆ

ಅವಳ ಆಸೆ ಏನೆಂದರೆ
ನಾನು ನಗಬೇಕಂತೆ
ನಾನು, ನಗ ಬೇಕಂತೆ

Tuesday, March 06, 2007

ನಾಯಿ

ಬೀದಿ ನಾಯಿಗಳಿಗಾಗಿ
ಹಾಕಬೇಡಿ ಕಣ್ಣೀರು
ಸುರಕ್ಷಿತವಾಗಿರಲಿ
ನಮ್ಮೆಲ್ಲರ ಚಿಣ್ಣರು
ಯುಗಾದಿ

ಮಾಲ್ ಗಳಲ್ಲಿ
ಭಾರಿ ಕಡಿತದ
ಮಾರಾಟ
ಬಾರ್ ಗಳಲ್ಲಿ
ಭಾರಿ ಕುಡಿತದ
ತೂರಾಟ

Thursday, February 08, 2007

ತೂಕಡಿಕೆ

ಕೂತು ಉಂಡರೆ ಸಾಲದು
ಹೊನ್ನ ಕುಡಿಕೆ,
ಉಂಡ ಮೇಲೆ
ತೂಕಡಿಕೆ.

Wednesday, February 07, 2007

ಬಿಂಬ

ನಾನಿನ್ನ ಮೆಚ್ಚಿದೆ
ರೂಪದಿಂದಲ್ಲ,
ನಾನಿನ್ನ ಬಯಸಿದೆ
ಬಯಕೆಯಿಂದಲ್ಲ

ನನ್ನ ಒಳ ಮನಸಿನೊಳಗೆ
ಬಿಂಬ ಒಂದಿತ್ತು
ಬೆರಗಾದೆ ಆ ಬಿಂಬ
ನೀನೇ ಆಗಿತ್ತು.
ವಿವಾದ

ಏರಿದ ಕಾವಿಗೆ
ನಗರವೇ ಉರಿದಿದೆ
ಭುಗಿಲೆದ್ದ ಹಿಂಸೆಗೆ
ರಣರಂಗವಾಗಿದೆ
ಯಾರದೋ ಏಟಿಗೆ
ಯಾರದೋ ರಕ್ತ
ನೀರಾಗಿ ಹರಿದಿದೆ.

Thursday, January 11, 2007

ನಗರ

ಬೆಳೆದಿದೆ ಎಷ್ಟು
ಬೆಂಗಳೂರು ನಗರಿ
ಓಡಾಡಲೂ ಇಲ್ಲಿ
ಜಾಗ ಇಲ್ಲಾರಿ

ದಿನಕ್ಕೊಂದೆರಡು
ಹೊಸಾ ಲೇಔಟು
ಗಗನಕ್ಕೆರಿದೆ
ರಿಯಲ್ ಎಸ್ಟೇಟು

ರಸ್ತೆ ರಿಪೇರಿ
ಮಾಡೋರಿಲ್ಲ
ಟ್ರಾಫಿಕ್ ಗೋಳು
ಕೇಳೋರಿಲ್ಲ

ಹೊಗೆಯನೇ ಕುಡಿಯುತ
ಬದುಕುವರಿಲ್ಲಿ
ಶುದ್ದ ಗಾಳಿಯು
ದೊರಕದು ಇಲ್ಲಿ

ಪಕ್ಕದ ಬೀದಿಯ
ನೋಡೇ ಇಲ್ಲ
ನೆರೆಮನೆಯವರ
ಪರಿಚಯವಿಲ್ಲ

ಮಾನವ ಮೌಲ್ಯಕೆ
ಬೆಲೆಯೇ ಇಲ್ಲ
ದುಡ್ಡೇ ದೊಡ್ಡದು
ಎನ್ನುವರೆಲ್ಲ.

Tuesday, January 09, 2007

ಚಳಿಯ ಕರೆ

ಗಡ ಗಡ ನಡುಗಿದೆ ಎದೆ
ಕರುಣೆಯಿಲ್ಲದ ಚಳಿಗೆ
ಕೂಗಿ ಕರೆಯುತಿದೆ ನಿನ್ನ
ಬರಲಾರೆಯಾ ಬಳಿಗೆ...?