Wednesday, February 13, 2008

ದಿನಾಚರಣೆ


ಪ್ರೀತಿಯ ಆಚರಣೆಗೆ
ದಿನವೊಂದು ಬೇಕೇಂದರೆ
ನಿತ್ಯದ ಉಸಿರಾಟಕ್ಕೆ
ಆಚರಣೆಯಿಲ್ಲವೇಕೆ..?

Monday, February 04, 2008

ಅಭಿವೃದ್ಧಿ

ಗ್ರಾಮಾಭಿವೃದ್ಧಿಯ
ಯೋಜನೆಗಳನ್ನು ಮಂಡಿಸಿದರು   
ಮೇಜು ಕುಟ್ಟಿ
ಸಭಿಕರು ಸ್ವಾಗತಿಸಿದರು
ಚಪ್ಪಳೆ ತಟ್ಟಿ
ಮರುದಿನ ಸೇರಿತದು
ಕಸದ ಬುಟ್ಟಿ
ಮೌನ

ಮಾತುಗಳು ಸೋತಾಗ
ಮೌನ ಮಾತಾಡಿತು
ಮಾತುಗಳ ಪರಿಮಿತಿಯ
ಮೀರಿ ಮಾತಾಡಿತು

ದಿನ ನಿತ್ಯದ ಲೋಕದಲಿ
ಮಾತುಗಳೆ ಮುಂದು
ಗಾದೆ ತಾ ಹೇಳುವುದು
ಜಗಳವಿಲ್ಲದಕೆಂದು

ಮನದ ಡುಗುಡವ
ಬಿಚ್ಚಿ ಹೇಳುವುದೆ ಮಾತು?
ಪದಪುಂಜ ಬರಿದಾಗಿ
ಮುದುಡುವುದು ಸೋತು

ಆ ದುಗುಡ ಬಿಂಬಿಸಲು
ಮಾತೇಕೆ ಬೇಕು?
ಕ್ಷಣ ಮೌನ ನಿಟ್ಟುಸಿರು
ಕಂಬನಿಯೇ ಸಾಕು.

ಮಾತುಗಳು ಬಡಿಯುವುಡು
ಕಿವಿಯ ತಮಟೆಗಳನ್ನು
ಮೌನವು ತಟ್ಟುವುದು
ಹೃದಯದ ಕದಗಳನ್ನು

ಭೋರ್ಗರೆವ ಕಡಲಿನ
ಅಲೆಯಂತೆ ಮಾತು
ತಣ್ಣನೆ ಹರಿಯುವ
ಜಲದಂತೆ ಮೌನ

ಕಡಲಿನಲೆಗಳ ಹೊಡೆತಕ್ಕೆ
ಒಡೆಯುವುದು ಕಲ್ಲು
ಹರಿವ ನೀರಿನ ಒಲುಮೆಗೆ
ಕರಗುವುದು ಕಲ್ಲು

ವ್ಯವಹಾರಿಕ ಲೋಕದಲಿ
ಮಾತುಗಳೆ ಶಕ್ತಿ
ಭಾವನಾ ಲೋಕದಲಿ
ಮೌನವೇ ಭಕ್ತಿ