Thursday, September 11, 2008

ಗಿಡ

ನಾನೆಟ್ಟ ಸಸಿ ಬೆಳೆದು,
ಹಸಿರೊಡೆದು ಗಿಡವಾಗಿ,
ನೂರೆಂಟು ಚಿಗುರೊಡೆದು,
ತಂಪೆರೆವ ಮರವಾಗಿ,
ಮೊಗ್ಗರಳಿ ಹೂವಾಗಿ,
ಮಿಡಿಕಚ್ಚಿ ಕಾಯಾಗಿ,
ಹಣ್ಣಾಗಿ ಸವಿಯುಣುವ
ಭಾಗ್ಯವೆನಗಿಲ್ಲ
ಬರ ಸಿಡಿಲಿನ ಹೊಡೆತಕ್ಕೆ
ಮರವೊರಗಿತಲ್ಲ.

Tuesday, May 27, 2008

ಓ ಮನಸೆ

ಎಲ್ಲಿರುವೆ ಓ ಮನಸೆ
ಕಾದಿರುವೆ ನಿನ್ನ
ಬಾ ಬೇಗ ಬಳಿಬಂದು
ತಬ್ಬಿಕೋ ನನ್ನ

ಬರಡಾದ ಮನದಲ್ಲಿ
ಪ್ರೀತಿ ಝರಿ ಚಿಮ್ಮಿಸಿ
ಉತ್ಸಾಹದ ಚಿಲುಮೆಯನು
ನನ್ನಲ್ಲಿ ಉಕ್ಕಿಸಿ

ನನ್ನನೊಬ್ಬನೆ ಬಿಟ್ಟು
ನೀ ದೂರ ಹೋದೆ
ಜೊತೆಯಾರೂ ಇಲ್ಲದೆ
ನಾ ಒಬ್ಬಂಟಿಯಾದೆ

ಕಲ್ಲನೆಸೆದು ನೀರನು
ನಾ ಕದಡಲಿಲ್ಲ
ನನ್ನೋಡಲ ಶಾಂತಿಯನು
ಕದಡಿರುವೆಯಲ್ಲ

ನಿನ್ನಿಂದ ಎನನ್ನೂ
ನಾ ಬಯಸಲಿಲ್ಲ
ನೀ ನನ್ನ ಜೋತೆಯಾಗು
ಈ ಜನ್ಮವೆಲ್ಲಾ

ನಿನ್ನ ನೆನಪಲಿ ಹಲವು
ಮಾಸಗಳು ಕಳೆದಿಹುದು
ನೀನನ್ನ ಸೇರುವ
ಆಸೆ ಬದುಕುಳಿದಿಹುದು

Saturday, April 26, 2008

ಒಂಟಿ ಮರ

ನಗದಿರಿ ಹಸಿರುಹೊತ್ತ ಮರಗಳೇ
ಬೆತ್ತಲಾದ ನನ್ನ ನೋಡಿ
ನಾನೂ ನಿಮ್ಮಂತೆಯೇ ಇದ್ದೆ
ಮೈತುಂಬ ಹಸಿರು ಇತ್ತು
ಮಡಿಲ ತುಂಬ ಹಣ್ಣು ಕಾಯಿ
ತುಂಬಿ ತುಂಬಿ ತುಳುಕುತಿತ್ತು
ಹಲವು ಹಕ್ಕಿಪಿಕ್ಕಿಗಳಿಗೆ
ನನ್ನ ರೆಂಬೆ ಮನೆಯಾಗಿತ್ತು

ಕಳೆದುಕೊಂಡೆ ಎಲ್ಲವನ್ನೂ
ಬಂದು ಬಳಗ ಗೆಳೆಯರನ್ನು
ಹಾಡಿನಲಿವ ಹಕ್ಕಿಗಳನು
ಹಸಿರು ಹೊರುವ ರೆಂಬೆಗಳನು
ನೆಲದೊಲಿಳಿದ ಬೇರುಗಳನು
ಮತ್ತೆ ಬೆಳೆವ ಶಕ್ತಿಯನ್ನೂ.

Friday, April 25, 2008

ನಡುಗಡ್ಡೆ

ಸುತ್ತುವರಿದ ನೀರ ನಡುವೆ
ಮುಳುಗಿ ಉಳಿದ ನೆಲದ ಮೇಲೆ

ಒಣಗಿನಿಂತ ಕೊರಲು ಕುಂಟೆ
ಅಳಿದು ಉಳಿದ ಹಸಿರ ಉಸಿರು

ಹೇಳುತಿಹುದೇ ತನ್ನ ಕಥೆಯ?
ನಾವರಿಯದ ಒಡಲ ವ್ಯಥೆಯ.

ಜನಕೆ ಬೆಳಕು ನೀಡಲೆಂದು
ತನ್ನ ಜೀವ ಒತ್ತೆ ಇಟ್ಟು

ಮುಳುಗಿ ಸತ್ತ ಬಂಧುಗಳನು
ನೆನೆಯುತಿಹುದೆ ಕಣ್ಣೀರಿಟ್ಟು..?

Wednesday, March 19, 2008

ಮಾರ್ಕೆಟು

ಏರುತಿಹುದು ಬೀಳುತಿಹುದು ನೋಡು ನಮ್ಮಯ ಮಾರ್ಕೆಟು
ಹೇಳುತಿಹುದು ಮತ್ತೆಮತ್ತೆ ಆರ್ಥಿಕತೆಯ ತಟಪಟ
ಬೇರು ಬುಲ್ಲು ತಿಂದು ಕೊಬ್ಬಿ ಮತ್ತೆ ಅಡ್ಡ ಮಲಗಿವೆ
ದುಡ್ಡು ಹಾಕಿ ಡಬ್ಬಲ್ ಮಾಡುವ ಆಸೆ ಇನ್ನೂ ಉಳಿದಿದೆ

(ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ..)
ಜಾಗಿಂಗ್ ಮಾಡ್ಬೇಕಂತೆ

ದಿನಾ ತಲೆ ತಿಂತಾಳೆ
ವಾಕಿಂಗ್ ಹೋಗು ಅಂತ
ಹೊಟ್ಟೆ ಕಮ್ಮಿ ಆಗ್ಬೇಕಾದ್ರೆ
ಜಾಗಿಂಗ್ ಮಾಡ್ಬೇಕಂತೆ

ನಾಲ್ಕು ಮಾರೂ ನಡಿಯೋದಿಲ್ಲ
ಮೈ ತುಂಬಾ ಬೊಜ್ಜು
ಕೂತು ಕೂತು ಆಗ್ತಿದ್ದೀಯ
ಎಮ್ಮೆಯಂತೆ ದಪ್ಪ

ಯೋಗ ಗೀಗ ಮಾಡಿ ಸ್ವಲ್ಪ
ವೈಟು ಕಮ್ಮಿ ಮಾಡಿ
ಇಲ್ಲ ಅಂದ್ರೆ ಆಗ್ತೀವಿ ನಾವು
ಆನೆ ಆಡಿನ ಜೋಡಿ

ಓಹೋ ನೀನೆ ನನ್ನ
ಆನೆ ಅಂತೀಯೇನು
ಕನ್ನಡಿಲಿ ಒಮ್ಮೆ ನೋಡು
ನೀನೇನ್ಕಮ್ಮಿಯೇನು

ಜಾಗಿಂಗ್ ವಾಕಿಂಗ್ ಎಲ್ಲಾ ಮಾಡಿ
ತೆಳ್ಳಗಾದವ್ರ್ಯಾರು
ದಿನಾ ವಾಕಿಂಗ್ ಮಾಡೋ ಆನೆ
ವೈಟು ಗೊತ್ತಿಲ್ವೇನು
ಓಟ
ಎಲ್ಲಿನೋಡಿದರಲ್ಲಿ
ಓಡುತಿವೆ ಆಸೆಗಳು
ನನ್ನೊಡನೆ ಒಂದಾಗಿ
ಓಡಲು ಕಲಿತವು

ಅದೂ ಸಾಲದೆಂಬಂತೆ
ನಿನ್ನೆ ಮೊನ್ನೆಯ ಮರಿಗಳು
ಶರವೇಗದಿಂದಲಿ
ಓಡುತಿಹವು

ಹಿಂದೆ ನೋಡಿದರಲ್ಲಿ
ಪರಿಚಿತರು ಯನಗಿಲ್ಲ
ಮುಂದೆ ಓಡುವರಾರೂ
ಹಿಂತಿರುಗಿ ನೋಡಿಲ್ಲ

ನಿಟ್ಟುಸಿರ ಬಿಡಲೆಂದು
ಕ್ಷಣಕಾಲ ನಾ ನಿಂತೆ
ಆಯಿತೆ ಅದು ನನಗೆ
ಬಂಧಿಸುವ ಸಂಕೋಲೆ

ಉಡುಗಿತೇ ನನ್ನಲ್ಲಿ
ಸಾಧಿಸುವ ಛಲ
ಉಳಿದೀತೆ ಗುರಿ ಮುಟ್ಟಿ
ಗೆಲ್ಲುವ ಬಲ

ಎನೇ ಆದರು ಸರಿಯೇ
ಓಡಲೇ ಬೇಕು
ಮುಂದೋಡಿದವರ
ಜೋತೆಗೂಡಬೇಕು

Wednesday, February 13, 2008

ದಿನಾಚರಣೆ


ಪ್ರೀತಿಯ ಆಚರಣೆಗೆ
ದಿನವೊಂದು ಬೇಕೇಂದರೆ
ನಿತ್ಯದ ಉಸಿರಾಟಕ್ಕೆ
ಆಚರಣೆಯಿಲ್ಲವೇಕೆ..?

Monday, February 04, 2008

ಅಭಿವೃದ್ಧಿ

ಗ್ರಾಮಾಭಿವೃದ್ಧಿಯ
ಯೋಜನೆಗಳನ್ನು ಮಂಡಿಸಿದರು   
ಮೇಜು ಕುಟ್ಟಿ
ಸಭಿಕರು ಸ್ವಾಗತಿಸಿದರು
ಚಪ್ಪಳೆ ತಟ್ಟಿ
ಮರುದಿನ ಸೇರಿತದು
ಕಸದ ಬುಟ್ಟಿ
ಮೌನ

ಮಾತುಗಳು ಸೋತಾಗ
ಮೌನ ಮಾತಾಡಿತು
ಮಾತುಗಳ ಪರಿಮಿತಿಯ
ಮೀರಿ ಮಾತಾಡಿತು

ದಿನ ನಿತ್ಯದ ಲೋಕದಲಿ
ಮಾತುಗಳೆ ಮುಂದು
ಗಾದೆ ತಾ ಹೇಳುವುದು
ಜಗಳವಿಲ್ಲದಕೆಂದು

ಮನದ ಡುಗುಡವ
ಬಿಚ್ಚಿ ಹೇಳುವುದೆ ಮಾತು?
ಪದಪುಂಜ ಬರಿದಾಗಿ
ಮುದುಡುವುದು ಸೋತು

ಆ ದುಗುಡ ಬಿಂಬಿಸಲು
ಮಾತೇಕೆ ಬೇಕು?
ಕ್ಷಣ ಮೌನ ನಿಟ್ಟುಸಿರು
ಕಂಬನಿಯೇ ಸಾಕು.

ಮಾತುಗಳು ಬಡಿಯುವುಡು
ಕಿವಿಯ ತಮಟೆಗಳನ್ನು
ಮೌನವು ತಟ್ಟುವುದು
ಹೃದಯದ ಕದಗಳನ್ನು

ಭೋರ್ಗರೆವ ಕಡಲಿನ
ಅಲೆಯಂತೆ ಮಾತು
ತಣ್ಣನೆ ಹರಿಯುವ
ಜಲದಂತೆ ಮೌನ

ಕಡಲಿನಲೆಗಳ ಹೊಡೆತಕ್ಕೆ
ಒಡೆಯುವುದು ಕಲ್ಲು
ಹರಿವ ನೀರಿನ ಒಲುಮೆಗೆ
ಕರಗುವುದು ಕಲ್ಲು

ವ್ಯವಹಾರಿಕ ಲೋಕದಲಿ
ಮಾತುಗಳೆ ಶಕ್ತಿ
ಭಾವನಾ ಲೋಕದಲಿ
ಮೌನವೇ ಭಕ್ತಿ

Friday, January 25, 2008

ಪಾಡು
ಎನೋ ತಳಮಳ
ಎನೋ ಕಳವಳ
ಎನೋ ಮರೆತಂತೆ
ಎನೋ ಕಳ ಕೊಂಡಂತೆ
ಎಲ್ಲರ ಮೇಲೂ ಕೋಪ
ಎಲ್ಲರಿಗೂ ಹಿಡಿ ಶಾಪ
ಇದು ಎಲ್ಲರ ಪಾಡು
ಭಾನುವಾರದ ಸಂಜೆಯ ಹಾಡು.