Saturday, April 26, 2008

ಒಂಟಿ ಮರ

ನಗದಿರಿ ಹಸಿರುಹೊತ್ತ ಮರಗಳೇ
ಬೆತ್ತಲಾದ ನನ್ನ ನೋಡಿ
ನಾನೂ ನಿಮ್ಮಂತೆಯೇ ಇದ್ದೆ
ಮೈತುಂಬ ಹಸಿರು ಇತ್ತು
ಮಡಿಲ ತುಂಬ ಹಣ್ಣು ಕಾಯಿ
ತುಂಬಿ ತುಂಬಿ ತುಳುಕುತಿತ್ತು
ಹಲವು ಹಕ್ಕಿಪಿಕ್ಕಿಗಳಿಗೆ
ನನ್ನ ರೆಂಬೆ ಮನೆಯಾಗಿತ್ತು

ಕಳೆದುಕೊಂಡೆ ಎಲ್ಲವನ್ನೂ
ಬಂದು ಬಳಗ ಗೆಳೆಯರನ್ನು
ಹಾಡಿನಲಿವ ಹಕ್ಕಿಗಳನು
ಹಸಿರು ಹೊರುವ ರೆಂಬೆಗಳನು
ನೆಲದೊಲಿಳಿದ ಬೇರುಗಳನು
ಮತ್ತೆ ಬೆಳೆವ ಶಕ್ತಿಯನ್ನೂ.

Friday, April 25, 2008

ನಡುಗಡ್ಡೆ

ಸುತ್ತುವರಿದ ನೀರ ನಡುವೆ
ಮುಳುಗಿ ಉಳಿದ ನೆಲದ ಮೇಲೆ

ಒಣಗಿನಿಂತ ಕೊರಲು ಕುಂಟೆ
ಅಳಿದು ಉಳಿದ ಹಸಿರ ಉಸಿರು

ಹೇಳುತಿಹುದೇ ತನ್ನ ಕಥೆಯ?
ನಾವರಿಯದ ಒಡಲ ವ್ಯಥೆಯ.

ಜನಕೆ ಬೆಳಕು ನೀಡಲೆಂದು
ತನ್ನ ಜೀವ ಒತ್ತೆ ಇಟ್ಟು

ಮುಳುಗಿ ಸತ್ತ ಬಂಧುಗಳನು
ನೆನೆಯುತಿಹುದೆ ಕಣ್ಣೀರಿಟ್ಟು..?