Friday, December 29, 2006

ಮಾಗಿಯ ಚಳಿಯು
ಮುಗಿಯುವ ತನಕ
ಮುಗಿಯದು ನಲ್ಲೆಯ
ಕಾಯುವ ತವಕ

Wednesday, December 20, 2006

ಕಳೆದ ದಿನಗಳು

ಮರೆಯಲಾರೆ ಆ ದಿನಗಳ,
ಕಳೆದು ಹೋದ ಸವಿ ನೆನಪುಗಳ.

ಸೈಕಲ್ಲಿಂದ ಬಿದ್ದ ಗಾಯಗಳ
ಮೇಸ್ಟ್ರಿಂದ ತಿಂದ ಹೊಡೆತಗಳ.

ಹತ್ತಿಳಿದ ಮರಗಳ
ಓಡಾಡಿದ ರಸ್ತೆಗಳ.

ಗೆಳೆಯರ ಒಡನಾಟ
ಒಟ್ಟಾಗಿ ಕಲಿತ ಪಾಠ.

ಹಿರಿಯರ ನುಡಿ ಮುತ್ತು,
ಕಿರಿಯರ ಸವಿ ಮಾತು.

Tuesday, December 19, 2006

ಅಂದು

ವಾರದ ಮೊದಲ ದಿನದಂದು
ಬೆಳಗಿನ ಘಂಟೆ ಏಳಾಗಿತ್ತು,
ಮಾಗಿಯ ಚಳಿಯ ಅಬ್ಬರವು
ಇಬ್ಬನಿಯೊಂದಿಗೆ ಮೇಳೈಸಿತ್ತು.

ಸೂರ್ಯನೂ ಮೋಡದ ಅಪ್ಪುಗೆಯಲ್ಲಿ
ಲೋಕವ ಬೆಳಗಲು ಮರೆತಿದ್ದ,
ಚಂದಿರನಂತೂ ಚಳಿಗೆ ಹೆದರಿ
ಬೆಚ್ಚನೆ ಹೊದ್ದು ಮಲಗಿದ್ದ.

ಕೆಲಸದ ಕರೆಯು ಕರೆಯುತಲಿದ್ದರೂ
ಹಾಸಿಗೆ ಬಿಡುವುದು ತರವಲ್ಲ,
ಇನ್ನೂ ಸ್ವಲ್ಪ ಮಲಗಿಯೇ ಬಿಡುವೆ
ತಡವಾಗಿ ಹೋದರೆ ಆಯ್ತಲ್ಲಾ.

ಹೊದಿಕೆಯ ಎಳೆದು ಮಲಗಿಯೇ ಬಿಟ್ಟೆ
ತಕ್ಷಣ ನಿದ್ದೆಯು ಬಂದಿತ್ತು,
ಎಚ್ಚರವಾಯ್ತು ಕಣ್ಣನು ಬಿಟ್ಟೆ
ಎಲ್ಲೆಲ್ಲೂ ಬೆಳಕು ತುಂಬಿತ್ತು.

ಸೂರ್ಯನು ಮೇಲೆ ಬಂದಿರಬೇಕು
ಸಣ್ಣನೆ ಬಿಸಿಲು ಬಂದಿತ್ತು,
ಅಯ್ಯೋ ಮರೆತೆ ಉಳಿಸಿದ ಕೆಲಸ
ಇಂದೇ ಮುಗಿಸ ಬೇಕಿತ್ತು.

ಸ್ನಾನವ ಸಂಜೆ ಮಾಡಿದರಾಯ್ತು
ಸಮಯವ ಕಳೆವುದು ಬೇಕಿಲ್ಲ,
ಬೇಗನೆ ಹೋಗಿ ಕೆಲಸ ಮುಗಿಸುವೆ
ಉಳಿಸುವುದೆಂದೂ ಸರಿಯಲ್ಲ.

Tuesday, December 12, 2006

ಪಯಣಿಗ

ನಾನೊಂದು ದೋಣಿಯ ಒಂಟಿ ಪಯಣಿಗನು,
ಗುರಿಯಿರದೆ ಶರಧಿಯಲಿ ತೇಲುತಿಹೆನು.
ಅಲೆಗಳ ಎತ್ತರವು ಮುಗಿಲು ಮುಟ್ಟಿಹುದು,
ಮಳೆಗಾಳಿ ರಭಸಕ್ಕೆ ಮನವು ನಡುಗಿಹುದು.
ಈ ದೋಣಿ ನೀರಿನಲಿ ಮುಳುಗದಿರಲಿ,
ಬಿರುಗಾಳಿ ಅಲೆಸುಳಿಗೆ ಸಿಲುಕದಿರಲಿ.
ದಡವ ತೋರಿಸಿ ನನ್ನ ಕೈಹಿಡಿದು ನಡೆಸು,
ಎಂದೆಂದು ನೀ ನನ್ನ ಮನದಲ್ಲಿ ನೆಲೆಸು.
ಎಂದು.?

ಮುತ್ತಿದಾ ಕಾರ್ಮೋಡ ಕರಗುವುದು ಎಂದು.?
ಮುತ್ತಿನಾ ಮಳೆನೀರು ಹರಿಯುವುದು ಎಂದು.?
ಬತ್ತಿದಾ ಕೆರೆತೊರೆಗಳುಕ್ಕುವುದು ಎಂದು.?
ಬರಡಾದ ಒಣ ಭೂಮಿ ಹಸಿರಾಗುವುದೆಂದು.?
ಬಾಡಿದಾ ಬಾಳಿನಲಿ ಚಿಗುರೊಡೆಯುವುದೆಂದು.?
ಆ ದಿನದ ಬರವಿನಲಿ ಕಾದಿರುವೆ ನಿಂದು.

Thursday, December 07, 2006

ನಮ್ಮ L D

ಒಂದು ದಿನ L D ಸಂಜೆ
ನಮ್ಮನೆಗೆ ಬಂದಿದ್ದ,
ಎಂದಿನಂತೆ ಅಂದೂ ಅವ್ನು
Bike ತಂದಿದ್ದ.

ಛಳಿಯು ಜಾಸ್ತಿ ಅಂತ ಅವ್ನು
ಮರೆತೇ ಬಿಟ್ಟಿದ್ದ,
ಅಂದೂ ಕೂಡಾ ಜರ್ಕಿನ್ನನ್ನು
ಬಿಟ್ಟು ಬಂದಿದ್ದ.

ರಾತ್ರಿಯೆಲ್ಲಾ ಕೂತು ನಮ್ ಜೊತೆ
ಹರಟೆ ಹೊಡೆದಿದ್ದ,
ಮಧ್ಯರಾತ್ರಿ ಆದ ಮೇಲೆ
ಮನೆಗೆ ಹೊರಟಿದ್ದ.

ಬೆಳಗಿನ ಝಾವ ಬಾವನ್ನ ಕರ್ಕಂಡು
Airport ಗೆ ಹೊಗಿದ್ದ,
ಬಾವನ್ನ Aeroplane ಹತ್ಸಿ
ವಾಪಾಸ್ ಹೊರ್ಟಿದ್ದ.

ದಾರಿಯಲ್ಲಿ ಛಳಿಯಾಗಿ
ಗಡ ಗಡ ನಡುಗಿದ್ದ,
ಸಿಕ್ಕ ಒಂದು Sumo ಜೊತೆ
Race ಮಾಡಿದ್ದ.

Sumo ದವ್ನು Brake ಹಾಕಿ
Right ಗೆ ತಿರ್ಗಿದ್ದ,
ಇವ್ನೂ ಗಟ್ಟಿ Brake ಹಾಕಿ
ಉರುಳಿ ಬಿದ್ದಿದ್ದ.

ಬಿದ್ದನಾದ್ರೂ ಪೆಟ್ಟೇ ಆಗ್ದೆ
ಎದ್ದು ನಿಂತಿದ್ದ,
ಮನೆಗೆ ಬಂದು ರಗ್ಗು ಹೊದ್ದು
ನಿದ್ದೆ ಮಾಡಿದ್ದ.
ಕಾಡುವ ನೆನಪುಗಳು ಮೂಡುವ ರವಿಯಂತೆ
ಸಮಯ ಕಳೆದಂತೆ ತೀಕ್ಷ್ಣ
ಆದರೆ
ಮುಳುಗಲಾರವೇಕೆ..?