Tuesday, December 19, 2006

ಅಂದು

ವಾರದ ಮೊದಲ ದಿನದಂದು
ಬೆಳಗಿನ ಘಂಟೆ ಏಳಾಗಿತ್ತು,
ಮಾಗಿಯ ಚಳಿಯ ಅಬ್ಬರವು
ಇಬ್ಬನಿಯೊಂದಿಗೆ ಮೇಳೈಸಿತ್ತು.

ಸೂರ್ಯನೂ ಮೋಡದ ಅಪ್ಪುಗೆಯಲ್ಲಿ
ಲೋಕವ ಬೆಳಗಲು ಮರೆತಿದ್ದ,
ಚಂದಿರನಂತೂ ಚಳಿಗೆ ಹೆದರಿ
ಬೆಚ್ಚನೆ ಹೊದ್ದು ಮಲಗಿದ್ದ.

ಕೆಲಸದ ಕರೆಯು ಕರೆಯುತಲಿದ್ದರೂ
ಹಾಸಿಗೆ ಬಿಡುವುದು ತರವಲ್ಲ,
ಇನ್ನೂ ಸ್ವಲ್ಪ ಮಲಗಿಯೇ ಬಿಡುವೆ
ತಡವಾಗಿ ಹೋದರೆ ಆಯ್ತಲ್ಲಾ.

ಹೊದಿಕೆಯ ಎಳೆದು ಮಲಗಿಯೇ ಬಿಟ್ಟೆ
ತಕ್ಷಣ ನಿದ್ದೆಯು ಬಂದಿತ್ತು,
ಎಚ್ಚರವಾಯ್ತು ಕಣ್ಣನು ಬಿಟ್ಟೆ
ಎಲ್ಲೆಲ್ಲೂ ಬೆಳಕು ತುಂಬಿತ್ತು.

ಸೂರ್ಯನು ಮೇಲೆ ಬಂದಿರಬೇಕು
ಸಣ್ಣನೆ ಬಿಸಿಲು ಬಂದಿತ್ತು,
ಅಯ್ಯೋ ಮರೆತೆ ಉಳಿಸಿದ ಕೆಲಸ
ಇಂದೇ ಮುಗಿಸ ಬೇಕಿತ್ತು.

ಸ್ನಾನವ ಸಂಜೆ ಮಾಡಿದರಾಯ್ತು
ಸಮಯವ ಕಳೆವುದು ಬೇಕಿಲ್ಲ,
ಬೇಗನೆ ಹೋಗಿ ಕೆಲಸ ಮುಗಿಸುವೆ
ಉಳಿಸುವುದೆಂದೂ ಸರಿಯಲ್ಲ.

No comments:

BLINK

 ಭವಿಷ್ಯ ಬರೆಯುವ IN(C)K ಆಗಬಹುದಿತ್ತು ಅರ್ಧದಲ್ಲೇ BLINK ಆಗಿ ಹೋದೆವು