Monday, February 04, 2008

ಮೌನ

ಮಾತುಗಳು ಸೋತಾಗ
ಮೌನ ಮಾತಾಡಿತು
ಮಾತುಗಳ ಪರಿಮಿತಿಯ
ಮೀರಿ ಮಾತಾಡಿತು

ದಿನ ನಿತ್ಯದ ಲೋಕದಲಿ
ಮಾತುಗಳೆ ಮುಂದು
ಗಾದೆ ತಾ ಹೇಳುವುದು
ಜಗಳವಿಲ್ಲದಕೆಂದು

ಮನದ ಡುಗುಡವ
ಬಿಚ್ಚಿ ಹೇಳುವುದೆ ಮಾತು?
ಪದಪುಂಜ ಬರಿದಾಗಿ
ಮುದುಡುವುದು ಸೋತು

ಆ ದುಗುಡ ಬಿಂಬಿಸಲು
ಮಾತೇಕೆ ಬೇಕು?
ಕ್ಷಣ ಮೌನ ನಿಟ್ಟುಸಿರು
ಕಂಬನಿಯೇ ಸಾಕು.

ಮಾತುಗಳು ಬಡಿಯುವುಡು
ಕಿವಿಯ ತಮಟೆಗಳನ್ನು
ಮೌನವು ತಟ್ಟುವುದು
ಹೃದಯದ ಕದಗಳನ್ನು

ಭೋರ್ಗರೆವ ಕಡಲಿನ
ಅಲೆಯಂತೆ ಮಾತು
ತಣ್ಣನೆ ಹರಿಯುವ
ಜಲದಂತೆ ಮೌನ

ಕಡಲಿನಲೆಗಳ ಹೊಡೆತಕ್ಕೆ
ಒಡೆಯುವುದು ಕಲ್ಲು
ಹರಿವ ನೀರಿನ ಒಲುಮೆಗೆ
ಕರಗುವುದು ಕಲ್ಲು

ವ್ಯವಹಾರಿಕ ಲೋಕದಲಿ
ಮಾತುಗಳೆ ಶಕ್ತಿ
ಭಾವನಾ ಲೋಕದಲಿ
ಮೌನವೇ ಭಕ್ತಿ

2 comments:

Seema S. Hegde said...

ಗಿರೀಶ,
"ಆ ದುಗುಡ ಬಿಂಬಿಸಲು
ಮಾತೇಕೆ ಬೇಕು?
ಕ್ಷಣ ಮೌನ ನಿಟ್ಟುಸಿರು
ಕಂಬನಿಯೇ ಸಾಕು."
ಈ ಸಾಲುಗಳು ತುಂಬಾ ಇಷ್ಟವಾದವು. ಚೆನ್ನಾಗಿ ಬರೆಯುತ್ತೀರಿ.
ಇನ್ನೊಂದು ಬ್ಲಾಗ್ ನಲ್ಲಿ "ಕಾಡುವ ನೆನಪುಗಳು" ಕೂಡ ತುಂಬಾನೆ ಇಷ್ಟಾಯಿತು. ಮತ್ತೆ ಮತ್ತೆ ಬರುವ ಮನಸ್ಸಗ್ತಾ ಇದೆ.

ತೇಜಸ್ವಿನಿ ಹೆಗಡೆ said...

ನಿಜಕ್ಕೂ ಮಾತು ಬೆಳ್ಳಿ ಮೌನ ಬಂಗಾರ.

BLINK

 ಭವಿಷ್ಯ ಬರೆಯುವ IN(C)K ಆಗಬಹುದಿತ್ತು ಅರ್ಧದಲ್ಲೇ BLINK ಆಗಿ ಹೋದೆವು